1876-1916. ಅಮೆರಿಕದ ಪ್ರಸಿದ್ಧ ಲೇಖಕ. ಸ್ಯಾನ್‍ಫ್ರಾನ್ಸಿಸ್ಕೋದಲ್ಲಿ 1876ರಲ್ಲಿ ಜನಿಸಿದ. ಇವನು ಅಮೆರಿಕದ ಉಗ್ರಪ್ರಕೃತಿವಾದಿಗಳಲ್ಲಿ ಒಬ್ಬ. ಕಾಲ್‍ಮಾಕ್ರ್ಸ್, ನೀಷೆ ಇಬ್ಬರಿಂದಲೂ ಪ್ರಭಾವಿತನಾಗಿದ್ದ. ಈತ ಬಡತನದಲ್ಲಿ ಬೆಳೆದ. ಹಾಗಾಗಿ ಅನೇಕ ತರಹದ ವೃತ್ತಿಗಳನ್ನು ಅನುಸರಿಸಿ ಜೀವನ ಯಾಪನೆ ಮಾಡಬೇಕಾದ ಒತ್ತಡಕ್ಕೊಳಗಾದ. ಸೆಣಬಿನ ಕಾರ್ಖಾನೆಯಲ್ಲಿ ಕೆಲಸಮಾಡಿದ. 17ನೆಯ ವಯಸ್ಸಿನಲ್ಲಿ ಒಬ್ಬ ಸಾಮಾನ್ಯ ನಾವಿಕನಾಗಿ 1897ರ ಕ್ಲೋಂಡಿಕೆ ಚಿನ್ನದ ನಿಕ್ಷೇಪದ ಹುಡುಕಾಟದಲ್ಲಿ ಭಾಗವಹಿಸಿದ. ಇವನು ಅನುಸರಿಸಿದ ಅನೇಕ ಕಸಬುಗಳಿಂದ ಗಳಿಸಿಕೊಂಡ ಅನುಭವಗಳನ್ನು ತರುವಾಯ ಬರೆವಣಿಗೆಗೆ ಇಳಿಸಿದ್ದಾನೆ. ಯುವಕನಾಗಿ ತಾನು ಕಂಡ ಬದುಕನ್ನು ಚಿತ್ರಿಸುವ ಸಂದರ್ಭದಲ್ಲಿ “ಸಮಾಜದ ಭೂಮಾಳಿಗೆಯ ದರ್ಶನ ನನಗಾಯಿತು.... ಆಳ, ಪಾತಾಳ, ಮನುಷ್ಯಲೋಕದ ಕೊಳಕಿನ ಪರಿಚಯವಾಯಿತು” ಎಂದು ದಾಖಲಿಸಿದ್ದಾನೆ. ತನ್ನ ಜೀವನಾನುಭವ ದಿಂದ ಈತ ಸಮಾಜವಾದಿಯಾದರೂ ಬಂಡವಾಳಶಾಹಿಗಳನ್ನು ಬಯಲಿ ಗೆಳೆಯುತ್ತಲೇ ಜನಾಂಗ ನೀತಿಯನ್ನು ಪ್ರಕಟಿಸುವಂಥ ಬರೆಹಗಳನ್ನೂ ಮಾಡಿ ತನ್ನ ಸಂಗಾತಿಗಳಿಗೆ ಮುಜುಗರವುಂಟುಮಾಡಿದ. 1900ರಲ್ಲಿ ಇವನು ಬರೆದ ದ ಸನ್ ಆಫ್ ದ ಈಸ್ಟ್ ಕೃತಿ ಅನೇಕ ಕಥೆಗಳನ್ನೊಳ ಗೊಂಡಿದ್ದು ಮುಂದಿನ ವಿಪುಲ ಕೃತಿರಚನೆಗಳಿಗೆ ನಾಂದಿಯಾಯಿತು. ದ ಕಾಲ್ ಆಫ್ ದ ವೈಲ್ಡ್ (1903) ಪ್ರಕಟಣೆಯ ಅನಂತರ ಇವನು ಪ್ರಸಿದ್ಧ ನಾದ. ಲಂಡನ್ ನಗರದ ಈಸ್ಟ್ ಎಂಡ್‍ನ ಕೊಳೆಗೇರಿ ಗಳಲ್ಲಿ ತಾನು ಇದ್ದು ಅನುಭವಿಸಿದ್ದನ್ನು ದಾಖಲಿಸಿ ರುವ ಪುಸ್ತಕ ದ ಪೀಪಲ್ ಆಫ್ ದ ಅಬಿಸ್ (1903).

ದ ಸೀ-ವೂಲ್ಫ್ (1904), ವೈಟ್ ಫ್ಯಾಂಗ್ (1906), ಸೌತ್ ಸೀ ಟೇಲ್ಸ್ (1911), ಜೆರ್ರಿ ಆಫ್ ದ ಸೌತ್ ಸೀಸ್ (1917)-ಇವು ಕಥಾ ಸಂಗ್ರಹಗಳು. ದ ಐರನ್ ಹೀಲ್ (1908) ವರ್ಗ ಸಂಘರ್ಷವನ್ನು ಕುರಿತಾದ ಕೃತಿ. ದ ವ್ಯಾಲಿ ಆಫ್ ದ ಮೂನ್ (1913) ಒಂದು ಆದರ್ಶಪ್ರಾಯವಾದ ಸಮು ದಾಯದ ಜೀವನ ಕ್ರಮ ವನ್ನು ತಿಳಿಸುವ ಕಥೆ. ಓದುಗರ ಮನಸ್ಸನ್ನು ಹಿಡಿದಿಡುವ ಮಾರ್ಬಿನ್ ಈಡನ್ (1909) ಇವನ ಆತ್ಮಚರಿತ್ರಾತ್ಮಕವಾದ ಸಂಗತಿಗಳನ್ನೊಳಗೊಂಡ ಕಾದಂಬರಿ. ಈ ಕಾದಂಬರಿಯ ನಾಯಕ ಒಬ್ಬ ನಾವಿಕ ಮತ್ತು ಕೂಲಿಕಾರ. ಶಿಕ್ಷಣವನ್ನು ಪಡೆದು ಒಬ್ಬ ಬರೆಹಗಾರನಾಗಲು ಅವನು ಪಡುವ ಹೋರಾಟ-ಇದರ  ಹಿಂದೆ ಸುಶಿಕ್ಷಿತಳಾದ ಅವನು ಪ್ರೀತಿಸುವ ಹೆಣ್ಣು ರೂತ್ ಮಾರ್ಸ್‍ಳ ಪ್ರೇರಣೆ, ಇದೆಲ್ಲದರ ಒತ್ತಾಸೆಯಿಂದ ಅವನಿಗೆ ದಕ್ಕದ ಯಶಸ್ಸು ಅಂತಿಮವಾಗಿ ಸೌತ್ ಸೀಯಲ್ಲಿ ಅವನು ಮುಳುಗಿ ಹೋಗುವ ರೀತಿ ಈ ಕಾದಂಬರಿಯನ್ನು ಒಂದು ಗಮನ ಸೆಳೆಯುವ ಕೃತಿಯನ್ನಾಗಿಸಿದೆ. 1913ರಲ್ಲಿ ರಚಿತವಾದ ಜಾನ್ ಬಾರ್ಲೆಕಾನ್ ಕೃತಿ ಕೂಡ ಆತ್ಮಚರಿತ್ರೆಯ ಅಂಶಗಳನ್ನೊಳಗೊಂಡಿದ್ದು ಮದ್ಯಪಾನದ ಹಿಡಿತದಿಂದ ಬಿಡುಗಡೆಗೊಳ್ಳಲು ಈತ ನಡೆಸಿದ ಹೋರಾಟದ ಚಿತ್ರಣ ಇದೆ. ಈತ ಸಮಾಜವಾದಿ ಚಿಂತನೆಗಳ ಬಗ್ಗೆಯೂ ಬರೆದ; ಪ್ರಬಂಧಗಳನ್ನೂ ರಚನೆ ಮಾಡಿದ. ಇವನು ತನ್ನ ಹ್ರಸ್ವವಾದ ಬಾಳನ್ನು ಉತ್ಕಟವಾದ ಚಟುವಟಿಕೆಗಳಿಂದ ತುಂಬಿದ. ಈತನ ಗೆಳೆಯ, ಪ್ರಸಿದ್ಧ ಲೇಖಕ ಅಪ್ಟನ್ ಸಿಂಕ್ಲೇರ್ ಈತನನ್ನು ಕುರಿತು “ಅಮೆರಿಕದ ಚರಿತ್ರೆಯಲ್ಲಿ ಕಂಡುಬರುವ ಒಬ್ಬ ಅದ್ಭುತ ಕ್ರಾಂತಿಕಾರಿ ವ್ಯಕ್ತಿ” ಎಂಬ ಹೃದಯ ತುಂಬಿದ ಮಾತನ್ನು ಆಡಿದ್ದಾನೆ. ಈತ 1916ರಲ್ಲಿ ನಿಧನನಾದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ